ಮನರಂಜನೆ | ತಮಿಳಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಸೂರ್ಯ ಅಭಿನಯದ ‘ಸೂರ್ಯ 42’ ಚಿತ್ರವೂ ಒಂದು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಘೋಷಣೆಯಾದ ಈ ಚಿತ್ರವು 3ಡಿಯಲ್ಲಿ ಮೂಡಿಬರುತ್ತಿದ್ದು, 10 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇದೀಗ ‘ಕಂಗುವ’ ಎಂದು ನಾಮಕರಣ ಮಾಡಲಾಗಿದ್ದು ಮೋಷನ್ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ.
ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.
ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರಕ್ಕೆ ಶೇ. 50ರಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.