ತುಮಕೂರು | ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲಿ ಎದ್ದಿದ್ದ ಭಿನ್ನಮತ ಶಮನವಾಗಿದೆ. ಹಿರಿಯ ನಾಯಕ, ಮಾಜಿ ಶಾಸಕ ಎಸ್.ಷಫಿ ಅಹಮ್ಮದ್ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಗೆ ಬಲ ನೀಡಲು ಮನಸ್ಸು ಮಾಡಿದ್ದಾರೆ.
ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಭಾನುವಾರ ತನ್ನ ರಾಜಕೀಯ ಗುರುವೂ ಆಗಿರುವ ಎಸ್.ಷಫಿ ಅಹ್ಮದ್ ಅವರನ್ನು ಭೇಟಿ ನೀಡಿ ಆಶೀರ್ವಾದ ಪಡೆದರು. ಜತೆಗೆ ತನಗೆ ನಿಮ್ಮ ಬೆಂಬಲ ಬೇಕೆಂದು ಕೇಳಿಕೊಂಡರು. ಷಫಿ ಅಹ್ಮದ್ ಇಕ್ಬಾಲ್ ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರಫೀಕ್ ಅಹ್ಮದೇ ಆಗಲಿ ಅಥವಾ ಇಕ್ಬಾಲೇ ಆಗಲಿ ಯಾರೇ ಆದರೂ ಕಾಂಗ್ರೆಸ್. ಹೀಗಾಗಿ ಪಕ್ಷ ಮುಖ್ಯವೆಂಬ ಭಾವನೆಯನ್ನು ವ್ಯಕ್ತಪಡಿಸಿದ ಷಫಿ ಅಹ್ಮದ್ ಇಕ್ಬಾಲ್ ಗೆಲುವಿಗೆ ಶ್ರಮಿಸು ಭರವಸೆ ನೀಡಿದ್ದಾರೆನ್ನಲಾಗಿದೆ.
ಅಳಿಯ, ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಗೆ ಟಿಕೆಟ್ ಕೈ ತಪ್ಪಿ ಇಕ್ಬಾಲ್ ಅಹಮ್ಮದ್ ಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಷಫಿ ಅಸಮಾಧಾನಗೊಂಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಇತ್ತೀಚೆಗೆ ಷಫಿ ಅವರನ್ನು ಭೇಟಿ ಮಾಡಿ ‘ಪಕ್ಷದ ಅಭ್ಯರ್ಥಿ ಇಕ್ಬಾಲ್ ಅವರನ್ನು ಗೆಲ್ಲಿಸುವ ಹೊಣೆ ನಿಮ್ಮದು ‘ ಎಂದು ಹೇಳಿದ್ದರು. ಸುರ್ಜೆವಾಲ ಮನವೊಲಿಕೆ ಯತ್ನ ಯಶಸ್ವಿಯಾಗಿತ್ತು. ಇದೀಗ ಇಕ್ಬಾಲ್ ಕೂಡ ಮಾತುಕತೆ ನಡೆಸಿರುವುದರಿಂದ ಗುರುವಿನ ಶ್ರೀರಕ್ಷೆ ಸಿಕ್ಕಂತಾಗಿದೆ.
ಪ್ರಚಾರಕ್ಕೆ ಅಧಿಕೃತ ಚಾಲನೆ
ನಗರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಭಾನುವಾರ ಮಹಾನಗರ ಪಾಲಿಕೆ ಸಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ನಿವಾಸದಿಂದ ಚಾಲನೆ ನೀಡಲಾಯಿತು. ಅಭ್ಯರ್ಥಿ ಇಕ್ಬಾಲ್ ಪರ ಪ್ರಚಾರಕ್ಕೆ ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಮಾಜಿ ವಿರೋಧಪಕ್ಷದ ನಾಯಕ ಕುಮಾರ್ ಜೆ. , ಸದಸ್ಯರಾದ ಶಕೀಲ್ ಅಹಮ್ಮದ್, ವಿನಾಯತ್ ಖಾನ್, ಶಿವರಾಂ ಮಹೇಶ್,ಎನ್., ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮೆಹಬುಬ್, ಪಾಶರಾಜು ಜಿ. , ಹಫೀಸ್ ಉಲ್ಲಾ ಖಾನ್, ಮಹಮ್ಮದ್ ಪೀರ್ , ತ್ರಿಲೋಕ್ ಜಿಯಾ ಮತ್ತಿತರರಿದ್ದರು.